ತಾವರಿಯ ಗಿಡ ಹುಟ್ಟಿ ದೇವರಿಗೆ ನೆರಳಾದಿ
ನಾ ಹುಟ್ಟಿ ಮನಿಗೆ ಎರವಾದೆ । ಹಡೆದವ್ವ
ನೀ ಕೊಟ್ಟ ಮನಿಗೆ ಹೆಸರಾದೆ ।।
ಬ್ಯಾಸಗಿ ದಿವಸಕ ಬೇವಿನ ಮರ ತಂಪ
ಭೀಮರತಿಯೆ೦ಬ ಹೊಳಿ ತಂಪ । ಹಡೆದವ್ವ
ನೀ ತಂಪ ನನ್ನ ತವರೀಗೆ ।।
ಹೆಣ್ಣು ಹಡೆಯಲಿ ಬ್ಯಾಡ ಹೆರವರಿಗಿ ಕೊಡಬ್ಯಾಡ
ಹೆಣ್ಣು ಹೋಗಾಗ ಅಳಬ್ಯಾಡ । ಹಡೆದವ್ವ
ಸಿಟ್ಟಾಗಿ ಶಿವಗ ಬೈಬ್ಯಾಡ ।।
ತಾಯಿ ಮಕ್ಕಳ ದನಿಯು ತಾಳ ಬಾರಿಸಿದಾಂಗ
ಜೋಡ ಕಿನ್ನೋರಿ ನುಡಿದಾಂಗ । ಹಲಸಂಗಿ
ಹೊತ್ತೇರಿ ತಾಸೆ ಬಡೆದಾಂಗ ।।
ತಾಯಿ ಕಾಣದ ಜೀವ ತಾವೂರಿ ಬಾವೂರಿ
ಭಾಳ ಬಿಸಲಾನ ಅವರೀಯ । ಹೂವಿನ್ಹಾ೦ಗ
ಬಾಡತೀನಿ ತಾಯಿ ಕರೆದೊಯ್ಯ ।।
ಗಂಜೀಯ ಕುಡಿದರು ಗಂಡನ ಮನಿ ಲೇಸ
ಅಂದಣದ ಮ್ಯಾಲ ಚವುರವ । ಸಾರಿದರ
ಹಂಗೀನತವರ ಮನಿ ಸಾಕ ।।
ತಾಯಿಲ್ವ ತವರೀಗಿ ಹೋಗದಿರು ನನ ಮನವ
ನೀರಿಲ್ದ ಕೆರಿಗಿ ಕರ ಬಂದು ।ತಿರುಗಾಗ
ಆಗ ನೋಡದರ ದುಃಖಗಳ ।।
ಅಡಗೀಯ ಮನಿಯಾಗ ಮಡದೀಯ ಸುಳುವಿಲ್ಲ
ಅಡಗಿ ಬಾಯೀಗಿ ರುಚಿಯಿಲ್ಲ । ಹಡೆದವ್ವ
ಮಡದಿ ತವರೀಗಿ ಹೋಗ್ಯಾಳ ।।
ಹಚ್ಚಡದ ಪದರಾಗ ಅಚ್ಚ ಮಲ್ಲಿಗಿ ಹೂವ
ಬಿಚ್ಚಿ ನನ ಮ್ಯಾಲ ಒಗೆದಂಥ । ರಾಯರನ
ಬಿಟ್ಹ್ಯಾ ೦ಗ ಬರಲೆ ಹಡೆದವ್ವ ।।
ಬಟ್ಟಲಗಣ್ಣೀಲಿ ಡಿಟ್ಟೀಸಿ ನೋಡ್ಯಾರ
ಸಿಟ್ಯಾಕೊ ರಾಯ ನನ ಮ್ಯಾಲ । ನಾ ಅಂಥ
ಹುಟ್ಟಿಸ್ಯಾಡವರ ಮಗಳಲ್ಲ ।।
ರಾಯ ಬರತಾರಂತ ರಾತ್ರಿಯಲಿ ನೀರಿಟ್ಟ
ರನ್ನ ಬಚ್ಚಲಕ ಮಣಿಹಾಕಿ । ಕೇಳೇನ
ಸಣ್ಣವಳ ಮ್ಯಾಲ ಸಂವತ್ಯಾಕ ।।
ಯಾಲಕ್ಕಿ ಕಾಯ್ ಸುಲಿದು ಯಾವಡಗಿ ಮಾಡಲಿ
ಊರಿಗ್ಹೋಗ್ಯಾರ ರಾಯರು । ಬಾರದೆ
ಯಾವಡಗಿ ಮಾಡಿ ಫಲವೇನ ।।
ಅಳುವ ಕಂದನ ತುಟಿಯು ಹವಳದ ಕುಡಿಯಂಗ
ಕುಡಿಹುಬ್ಬು ಬೇವಿನೆಸಳಂಗ । ಕಣ್ಣೋಟ
ಶಿವನ ಕೈಯಲಗು ಹೊಳೆದಂಗ ।।
ತಾಯಿದ್ರ ತವರೆಚ್ಚು ತಂದಿದ್ರ ಬಳಗ್ಹೆಚ್ಚು
ಸಾವಿರಕೆ ಹೆಚ್ಚು ಪತಿಪುರುಷ । ಹೊಟ್ಟೀಯ
ಮಾಣಿಕದ ಹರಳು ಮಗ ಹೆಚ್ಚು ।।
ನನ್ನ ಅಂಗಳದಾಗ ಮಲ್ಲಿಗಿ ಗಿಡ ಹುಟ್ಟಿ
ಝಲ್ಲೀಸಬ್ಯಾಡೊ ಗಿಣಿರಾಮ । ನಿಮ್ಮಂಥ
ಬಾಲರೋಗ್ಹಾರ ಝಳಕಾಕ ।।
ಬಾಲಕರಿಲ್ಲದ ಬಾಲೀದ್ಯಾತರ ಜನ್ಮ
ಬಾಡೀಗಿ ಎತ್ತು ದುಡಿದಂಗ । ಬಾಳೆಲೆಯ
ಹಾಸ್ಯು೦ಡು ಬೀಸಿ ಒಗೆದಂಗ ।।
ಕಂದನ ಕುಡು ಶಿವನೆ ಬಂಧನ ಬಡಲಾರೆ
ಹಂಗೀನ ಬಾನ ಉಣಲಾರೆ । ಮರ್ತ್ಯದಾಗ
ಬಂಜೆ೦ಬ ಶಬುದ ಹೊರಲಾರೆ ।।
No comments:
Post a Comment