ಮೈಸೂರು ದಸರಾ ಹಾಡು
ಆಶ್ವಯುಜ ಶುದ್ಧ ಮಾನವಮಿ ಬರಲೆಂದು
ಶಾಶ್ವತದಿ ಹರಸಿದೆವು ಬಾಲಕರು ಬಂದು
ಈಶ ನಿಮಗತ್ಯಧಿಕ ಸುಖವ ಕೊಡಲೆಂದು
ಲೇಸಾಗಿ ಹರಸಿದೆವು ಬಾಲಕರು ಬಂದು
ಧನಕನಕ ವಸ್ತುವಾಹನವಾಗಲೆಂದು
ಕನಕದಂಡಿಗೆ ಚೌರಿ ನಿಮಗಾಗಲೆಂದು
ದಿನದಿನಕೆ ರಾಜಮನ್ನಣೆ ಹೆಚ್ಚಲೆಂದು
ಅನುದಿನವು ಹರಸಿದೆವು ಬಾಲಕರು ಬಂದು
ಛತ್ರ ಚಾಮರ ತೇಜಿ ನಿಮಗಾಗಲೆಂದು
ಅರ್ತಿಯಿಂ ಮಾಲಕುಮಿ ನಿಮಗೊಲಿಯಲೆಂದು
ಪುತ್ರಪೌತ್ರರು ನಿಮಗೆ ಹೆಚ್ಚುತ್ತಿರಲೆಂದು
ಅರ್ತಿಯಿಂ ಹರಸಿದೆವು ಬಾಲಕರು ಬಂದು
ಮಳೆ ಬಂದು ಬೆಳೆ ಬೆಳೆದು ಧರೆ ತಣಿಯಲೆಂದು
ತಿಳಿಗೊಳಗಳುಕ್ಕಿ ತರುಗಳು ಕರೆಯಲೆಂದು
ನಳಿನಮುಖಿಯರು ಸುಪುತ್ರರ ಪಡೆಯಲೆಂದು
ಇಳೆಯೊಳಗೆ ಹರಸಿದೆವು ಬಾಲಕರು ಬಂದು
ಆಯುರಾರೋಗ್ಯಗಳು ನಿಮಗಾಗಲೆಂದು
ಶ್ರೇಯಸ್ಸು ಸಂಪತ್ತು ಹೆಚ್ಚುತಿರಲೆಂದು
ಆಯತದಿ ಜಗದೊಡೆಯನೊಲವಾಗಲೆಂದು
ಪ್ರೀಯದಿಂ ಹರಸಿದೆವು ಬಾಲಕರು ಬಂದು
No comments:
Post a Comment